ಮತ್ತೊಂದು ಹೊಸ ಪ್ರಯಾಣ ಆರಂಭವಾಯಿತು. ಅದೇಕೋ ಕಣ್ಣುಗಳು ಮಂಜಾಗುತ್ತಿವೆ. ಪ್ರತಿ ವಿದಾಯವೂ ಒಂದು ನವೀನ ಮಿಲನಕ್ಕೆ ನಾಂದಿಯಾಗುತ್ತದೇನೋ ಎಂದು ಆಶಿಸುವುದರಲ್ಲಿ ತಪ್ಪಿಲ್ಲ, ಆಲ್ವಾ ? ಜೀವನ ಮೌನವಾಗಿ ಎಷ್ಟೋ ಹೊಸ ಅನುಭವಗಳಿಂದ ತುಂಬುತ್ತ, ಏನೇನೋ ಕಲಿಸುತ್ತಾ, ಒಮ್ಮೊಮ್ಮೆ ಬೆದರಿಸುತ್ತ, ಇನ್ನೊಮ್ಮೆ ಮುದ್ದಿಸುತ್ತ, ಮತ್ತೊಮ್ಮೆ ಅಳಿಸುತ್ತ, ಮಗದೊಮ್ಮೆ ನಗಿಸುತ್ತಾ.... ಇನ್ನೂ ನನಗೆ ಬಹಳಷ್ಟು ವಿಷಯಗಳಿವೆ ಹೇಳಿಕೊಳ್ಳಲು.
ಸುಮ್ಮನೆ ಬೀಸುವ ಗಾಳಿ ಕೂಡ ಕೊಳಲಿನಿ ಮೂಲಕ ಹಾದು ಹೋದರೆ ಸಂಗೀತವಾಗುತ್ತದೆ. ತುಂತುರು ಮಳೆ ಹನಿಗಳು ಬೀಳುತ್ತಿರುವಾಗ ಅವುಗಳಿಗೆ ಸೂರ್ಯನ ಕಿರಣಗಳಿಂದ ಸ್ಪರ್ಶಿತವಾಗುವ ಅವಕಾಶ ದೊರೆತರೆ ಕಾಮನಬಿಲ್ಲಾಗುತ್ತದೆ. ದುಂಬಿಯ ಚುಂಬನದಿಂದ ಪುಳಕಿತಗೊಂಡಂತೆ ಮೊಗ್ಗರಳಿ ಹೂವಾಗುತ್ತದೆ. ತುಂಟತನದ ಯೋಚನೆಗಳನ್ನು ನೆನೆನೆದು ನನ್ನ ತುಟಿಗಳು ಮುಗುಳ್ನಗುತ್ತವೆ. ಒಮ್ಮೊಮ್ಮೆ ಈ ಯೋಚನೆಗಳು, ಈ ಭಾವನೆಗಳು, ಈ ಅನುಭೂತಿಗಳು... ಇವೆಲ್ಲವೂ ಅದೆಷ್ಟು ನನ್ನನ್ನು ತಮ್ಮಲ್ಲಿ ಮುಳುಗಿಸಿಕೊಂಡು ಬಿಡುತ್ತವೆಂದರೆ ಮೇಲೆಳುವುದಕ್ಕೆ ಮನಸ್ಸು ಒಪ್ಪುವುದೇ ಇಲ್ಲ. ಇಡೀ ಜಗತ್ತಿನಿಂದಲೇ ನನ್ನ ಸಂಬಂಧ ಕಡಿದು ಹೋಗಿರುತ್ತದೆ. ಆ ಗುಂಗಿನಿಂದ ಹೊರ ಬಂದರೂ ಮತ್ತೆ ಅಲ್ಲಿಗೇ ಹೋಗಬೇಕೆನಿಸುತ್ತದೆ. ಅಲ್ಲಿಯೇ ಇರಬೇಕೆನಿಸುತ್ತದೆ.
ಇಲ್ಲಿ ಅಲ್ಲಿಂದಲೇ ಆರಿಸಿ ತಂದ ಕಥೆಗಳಿವೆ. ಈ ಕಥೆಗಳು ಬದುಕಿನಿಂದ ದೂರವಾದರೂ ಮನಸ್ಸಿಗೆ ಹತ್ತಿರವಾಗುತ್ತವೆ. ಇವುಗಳಿಗೆ ನನ್ನ ಕಲ್ಪನೆಯೇ ಮುಲಾಧಾರವಾಗಿದ್ದರೂ ಆ ಕಲ್ಪನೆಗೆ ನನ್ನ ಯೋಚನೆಗಳು, ಅಭಿಪ್ರಾಯಗಳು, ಅನುಭೂತಿಗಳು, ನಾ ಕಂಡುಕೊಂಡ ಸತ್ಯಗಳು, ವಾಸ್ತವಾಂಶಗಳು ನೆಲೆ ಒದುಗಿಸುತ್ತ ಹೋಗುತ್ತವೆ.
ಕಥೆ ಓದಿದ ನಂತರ ದಯವಿಟ್ಟು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಮರೆಯಬೇಡಿ. ಏಕೆಂದರೆ ಕಥೆ ಓದುವುದು ಮತ್ತು ಬರೆಯುವುದು ಒಂದಕ್ಕೊಂದು ಪೂರಕವಾಗಿರುವ ಅಂಶಗಳಾಗಿದ್ದರೂ ಕೂಡ ಎರಡು ವಿಭಿನ್ನ ಪ್ರಕ್ರಿಯೆಗಳು. ಹೀಗಾಗಿ ಓದುಗ ಮತ್ತು ಲೇಖಕನ ದೃಷ್ಟಿಕೋನದಲ್ಲಿ ವ್ಯತ್ಯಾಸ ಮತ್ತು ಅಂತರವಿರುವುದು ಸಹಜ. ನಿಮ್ಮ ದೃಷ್ಟಿಕೋನ, ಸಲೆಹೆ - ಸೂಚನೆಗಳನ್ನು ದಯವಿಟ್ಟು ನಿಷ್ಪಕ್ಷಪಾತ ಕಾಮೆಂಟ್ ಮೂಲಕ ತಿಳಿಸಬೇಕೆಂದು ವಿನತಿಸುತ್ತೇನೆ.
No comments:
Post a Comment