Copy Right...!

I firstly declare here that all the content written in the blog is exclusively written by me and I hold the copyrights of each and everything. Be it a poem or a novel or a story are exclusively owned by me. This declaration is important in a world that seems so worried of piracy.

Thursday, December 1, 2011

ಕರುಣೆ ಇಲ್ಲದ ಕಟುಕರು ೪

ದೃಶ್ಯ - ೧


ದೃಶ್ಯ – ೨


ದೃಶ್ಯ – ೩


ದೃಶ್ಯ – ೪

(ಹುಡುಗ ಬೆಡ್ ಮೇಲೆ ಮಲಗಿದ್ದಾನೆ. ಇತ್ತ ಕಡೆ ಡಾಕ್ಟರ್ ನಿಂತಿದ್ದಾನೆ. ಅತ್ತ ಕಡೆ ಕಂಪೌಂಡರ್ ನಿಂತಿದ್ದಾನೆ. ಇನ್ನೊಂದು ಕಡೆ ಇಬ್ಬರು ಸಿಸ್ಟರ್ಸ್ ನಿಂತಿದ್ದಾರೆ. ಡಾಕ್ಟರ್ ತನ್ನ ಸ್ಟೇತಾಸ್ಕೋಪ್‍ನಿಂದ ಹುಡುಗನ ತಲೆ ಚೆಕ್ ಮಾಡತೊಡಗುತ್ತಾನೆ. ಆದರೆ ಕಂಪೌಂಡರ್ ಹೃದಯ ಚೆಕ್ ಮಾಡಲು ತಿಳಿಸುತ್ತಾನೆ. ಹುಡುಗ ಕಕ್ಕಾಬಿಕ್ಕಿಯಾದಂತೆ ತೋರುತ್ತಿದೆ.)

ಡಾಕ್ಟರ್ :- “ಸಿರಿಂಜ್ ಪ್ಲೀಜ್” (ಸಿಸ್ಟರ್ ಸಿರೀಂಜ್ ಕೊಡುತ್ತಾಳೆ.) “ನೋ, ನೊ. ಇದು ಸಾಕಾಗಲ್ಲ. ದೊಡ್ಡದು ಬೇಕು” (ಸಿಸ್ಟರ್ ದೊಡ್ಡ ಸಿರೀಂಜ್ ಕೊಡುತ್ತಾಳೆ. ಹುಡುಗ ಹೆದರಿಕೆಯಿಂದ ಬೆಡ್‍ನಿಂದ ಕೆಳಗಿಳಿಯಲು ಪ್ರಯತ್ನಿಸುತ್ತಾನೆ. ಆದರೆ ಕಂಪೌಂಡರ್ ಕೆಳಗಿಳಿಯಲು ಬಿಡುವುದಿಲ್ಲ. ಡಾಕ್ಟರ್ ಇಂಜೆಕ್ಶನ್ ಕೊಟ್ಟ ನಂತರ ಹುಡುಗ ನಿಶ್ಚಲವಾಗುತ್ತಾನೆ.) “ನೈಫ್ & ಸೀಜರ್ ಪ್ಲೀಜ್” (ಸಿಸ್ಟರ್ ಸಣ್ಣ ಕತ್ತರಿ ಹಾಗೂ ಸಣ್ಣ ಚಾಕು ಕೊಡುತ್ತಾಳೆ) “ನೋ, ನೊ…. ಇದೆಲ್ಲ ಸಾಕಾಗಲ್ಲ. ವಿ ನೀಡ್ ಬಿಗ್ ಥಿಂಗ್ಸ್. ಇಂವಾ ಹಳ್ಳಿ ಹುಡುಗ. ಚರ್ಮ ತುಸು ದಪ್ಪಗಿರುತ್ತೆ. ಬ್ರಿಂಗ್ ಬಿಗ್ ನೈಫ್ & ಸೀಜರ್” (ಸಿಸ್ಟರ್ ದೊಡ್ಡ ಕತ್ತರಿ ಮತ್ತು ಚಾಕು ತಂದು ಕೊಡುತ್ತಾಳೆ. ಡಾಕ್ಟರ್ ಅವುಗಳನ್ನು ಪರೀಕ್ಷಿಸಿ….) “ಇದು ಅಷ್ಟೊಂದು ಶಾರ್ಪಾಗಿಲ್ಲ.ಇದನ್ನು ಸ್ವಲ್ಪ ಶಾರ್ಪ್ ಮಾಡು.” (ಎಂದೆನ್ನುತ್ತಾ ದೊಡ್ಡ ಚಾಕುವನ್ನು ಕಂಪೌಂಡರ್‍ಗೆ ಕೊಡುತ್ತಾನೆ. ಕಂಪೌಂಡರ್ ಅದನ್ನು ಒಂದು ಕಲ್ಲಿನ ಮೇಲೆ ಉಜ್ಜಲಾರಂಭಿಸುತ್ತಾನೆ. ಆ ನಂತರ ಡಾಕ್ಟರ್ ಹುಡುಗನ ಹೊಟ್ಟೆ ಕೊಯ್ಯಲು ಮುಂದಾಗುತ್ತಾನೆ. ಆದರೆ ಕಂಪೌಂಡರ್ ಅವನನ್ನು ತಡೆದು….)

ಕಂಪೌಂಡರ್ :- “ಸಾರ್ ಏನ್ ಮಾಡ್ತಾ ಇದ್ದೀರಾ ? ಕಿಡ್ನಿ ಇರೋದು ಅಲ್ಲಿ ಅಲ್ಲ. ಇಲ್ಲಿದೆ.”

ಡಾಕ್ಟರ್ :- “ಅದು ನಿನಗ್ ಹೇಗ್ಗೋತ್ತು ?” (ಆಶ್ಚರ್ಯದಿಂದ ಕೇಳುತ್ತಾನೆ.)

ಕಂಪೌಂಡರ್ :- “ಪಿಕ್ಚರ್‍ಗಳಲ್ಲಿ ನೋಡಿದ್ದೀನಿ ಡಾಕ್ಟ್ರೇ.”

ಡಾಕ್ಟರ್ :- “ಸರಿ, ಹಾಗಿದ್ರೆ ಇವನನ್ನು ಅಂಗಾತವಾಗಿ ಮಲಗಿಸು.”

(ನಂತರ ಡಾಕ್ಟರ್ ಮತ್ತು ಕಂಪೌಂಡರ್ ಇಬ್ಬರು ಕೂಡಿಕೊಂಡು ಆಪರೇಶನ್ ಮಾಡತೊಡಗುತ್ತಾರೆ. ಸ್ವಲ್ಪ ಸಮಯದಲ್ಲೆ ಅವರೀರ್ವರೂ ಆಪರೇಶನ್ ಮೂಲಕ ಕಿಡ್ನಿ ತೆಗೆದು ಪ್ರೇಕ್ಷಕರಿಗೆ ತೋರಿಸುತ್ತಾರೆ. ನಂತರ ಡಾಕ್ಟರ್ ಸೂಜಿಯ ಬದಲಿಗೆ ಡಬ್ಬಣ ಬಳಿಸಿ ಹೊಲಗೆ ಹಾಕುತ್ತಿರುವಂತೆ ತೋರಿಸುತ್ತಾನೆ. ಎಲ್ಲಾ ಆದ ನಂತರ ಹುಡುಗನನ್ನು ಎಬ್ಬಿಸಲಾಗುತ್ತದೆ. ಕಂಪೌಂಡರ್ ನಿಧಾನವಾಗಿ ಹುಡುಗನನ್ನು ತಂದೆ ತಾಯಿಗಳ ಬಳಿ ತಂದು ಒಪ್ಪಿಸುತ್ತಾನೆ. ಹುಡುಗ ಒಮ್ಮೆ ಕೈ ಜಾಡಿಸುತ್ತಿದ್ದಾನೆ. ಮತ್ತೊಮ್ಮೆ ಟೊಂಕ ಮುಟ್ಟಿಕೊಂಡು “ಆಹ್, ಅಮ್ಮಾ” ಎಂದೆಲ್ಲಾ ನರಳುತ್ತಿದ್ದಾನೆ. ಕಂಪೌಂಡರ್ ತಂದೆಯಿಂದ ಹಣ ತೆಗೆದುಕೊಂಡು ಎಣಿಸಿದ ನಂತರ ಕೆಲವು ನೋಟುಗಳನ್ನು ತನ್ನ ಟೊಪ್ಪಿಗೆಯ ಒಳಗಿಟ್ಟುಕೊಂಡು ಅದನ್ನು ಮತ್ತೆ ಧರಿಸುತ್ತಾನೆ. ಒಳ ಹೋಗಿ ಡಾಕ್ಟರ್ ಕೈಯಲ್ಲಿ ಉಳಿದ ಹಣವನ್ನು ಕೊಡುತ್ತಾನೆ. ಇತ್ತ ಸಿಸ್ಟರ್‍ಗಳಿಬ್ಬರೂ ಬೆಡ ಸರಿ ಪಡಿಸುತ್ತಾ ಆಪರೇಶನ್‍ನಲ್ಲಿ ಬಳಕೆಯಾದ ಉಪಕರಣಗಳನ್ನು ಜೋಡಿಸುತ್ತಿದ್ದಾರೆ)

ಸಿಸ್ಟರ್ ೧ :- “ಏಯ್ ಸುನಂದಾ, ಆಪರೇಶನ್‍ನಲ್ಲಿ ಬಳಸಿದ ಸೀಜರ್ ಇಲ್ಲೆಲ್ಲೂ ಕಾಣಿಸ್ತಾನೆ ಇಲ್ವಲ್ಲೆ”

ಸಿಸ್ಟರ್ ೨ :- “ಇಲ್ಲೇ ಎಲ್ಲೋ ಇರಬೇಕು ನೋಡೆ”

ಸಿಸ್ಟರ್ ೧ :- “ಊಹ್ಞೂಂ, ನಾನು ಚೆನ್ನಾಗಿಯೆ ಹುಡಿಕಿದ್ದಿನಿ. ಅದು ಇಲ್ಲೆಲ್ಲೂ ಕಾಣಿಸ್ತಾ ಇಲ್ಲ.”

ಸಿಸ್ಟರ್ ೨ :- “ಹಾಗಿದ್ದರೆ, ಡಾಕ್ಟರ್ ಸಾಹೇಬರಿಗೆ ಹೇಳೊಣ ಬಾ” (ಇಬ್ಬರೂ ಕೂಡಿಕೊಂಡು ಡಾಕ್ಟರ್ ಹತ್ತಿರ ಬರುತ್ತಾರೆ ಹಾಗೂ ವಿಷಯ ತಿಳಿಸುತ್ತಾರೆ.)

ಡಾಕ್ಟರ್ :- “ಮೈ ಗಾಡ್, ನನಗನ್ನಿಸುತ್ತೆ ಆ ಸೀಜರ್ ಆ ಹುಡುಗನಲ್ಲಿಯೆ ಉಳಿದಿರಬೇಕೂಂತ.”

ಕಂಪೌಂಡರ್ :- “ಅದಕ್ಕ್ಯಾಕೆ ಅಷ್ಟೊಂದು ತಲೆ ಕೆಡಿಸಿಕೊಳ್ತಿರಾ ಸಾರ್ ನೀವು. ಮತ್ತ ಹೊಟ್ಟಿ ನೋವೂಂತ ಅವರು ನಮ್ಮಲ್ಲಿಗೆ ಕರ್ಕೊಂಡು ಬರ್ತಾರೆ ನೋಡ್ತಾ ಇರಿ. ಮತ್ತೆ ಆಪರೇಶನ್ ಮಾಡಿ ಮತ್ತೆ ಹಣ ಸುಲಿಗೆ ಮಾಡಿದರಾಯಿತು. ಹ್ಹಾ… ಹ್ಹಾ…. ಹ್ಹಾ….” (ಎಂದು ನುಡಿದು ಜೋರಾಗಿ ನಗುತ್ತಾನೆ. ಉಳಿದವರೆಲ್ಲ ನಗುತ್ತಾರೆ.)


----: ಮುಗಿಯಿತು :-----

ಕರುಣೆ ಇಲ್ಲದ ಕಟುಕರು ೩

ದೃಶ್ಯ – ೩

ಕಂಪೌಂಡರ್ :- “ನೋಡಪ್ಪ, ನಿಮ್ಮಗುಂದು ರಿಪೊರ್ಟ ಬಂದಾದ. ಅದರ ಪ್ರಕಾರ ನಿಮ್ಮಗನ ಹೊಟ್ಟೆಯಲ್ಲಿ ಗಡ್ಡೆ ಆಗ್ಯಾದ. ಅದನ್ನು ತೆಗಿಬೇಕಂದ್ರ ದೊಡ್ಡ ಆಪರೇಶನ್ ಮಾಡಬೇಕು. ಇಲ್ಲಾಂದ್ರ ನಿಮ್ಮಗ ಉಳಿಯೋದು ಖಂಡಿತ ಸಾಧ್ಯವಿಲ್ಲ.”

ರಂಗಣ್ಣ :- “ಏನ್… ಏನ್ ಹೇಳ್ತಾ ಇದ್ದೀರಾ ನೀವು ? ನ…. ನಮ್ಮ ಕೂಸಿನ್ ಹೊಟ್ಯಾಗ್ ಗಡ್ಡಿ ಆಗ್ಯಾದೇನು ?”

ಕಂಪೌಂಡರ್ :- “ಹ್ಞೂಂ, ಹೌದು. ಈಗ್ಗೇ ಆಪರೇಶನ್ ಮಾಡಬೇಕು. ಆಪರೇಶನ್ ಖರ್ಚು ಹತ್ತು ಸಾವಿರ ಆಗುತ್ತೆ.”

ರಂಗಣ್ಣ :- “ಹತ್ತು ಸಾವಿರ ! ಅಷ್ಟೊಂಜ್ದು ಹಣಾನ ? ನಮ್ಮ ಹತ್ರ ಹಣ ಎಲ್ಲಿಂದ ಬರಬೇಕ್ರಿ ? ನಾವು ತುಂಬಾ ಬಡೂರು.”

ಕಂಪೌಂಡರ್ :- “ಇವತ್ತು ಹಣ ಇಲ್ಲಾಂದ್ರೆ ನಾಳೆ ನಿಮ್ಮಗುಂದು ಹೆಣ ನೋಡಬೇಕಾಗುತ್ತೆ ಹುಷಾರ್.”

ಶಾಂತಮ್ಮ :- “ಅಯ್ಯೋ, ಹಂಗನ್ನಬ್ಯಾಡ್ರಿ. ನನ್ನ ಕತ್ತನ್ಯಾಗಿಂದು ತಾಳಿ ಮಾರಿಯಾದ್ರೂ ಹಣ ತರ್ತೀನಿ. ನಮ್ಮಗೀನ ಉಳಿಸಿ ಕೊಡ್ರಿ.” ( ಗೊಗರಿಯುವ ಧ್ವನಿಯಲ್ಲಿ ನುಡಿದಳು.)

ಕಂಪೌಂಡರ್ :- “ ಸರಿ ಹಂಗಾರ, ನೀಚು ಹೋಗಿ ಹಣ ತೊಗೊಂಬರ್ರಿ. ನಾವಿಲ್ಲಿ ಆಪರೇಶನ್‍ಗೆ ವ್ಯವಸ್ಥೆ ಮಾಡ್ತೀವಿ.” (ಎಂದು ನುಡಿದು ಕಂಪೌಂಡರ್ ಒಳಗಡೆ ಡಾಕ್ಟರ್ ಹತ್ತಿರ ಹೋಗುತ್ತಾನೆ).

ಕಂಪೌಂಡರ್ :- “ಡಾಕ್ಟ್ರೇ, ನಾ ಹೇಳಿದಂತೆ ಅವರು ಆಪರೇಶನ್‍ಗೆ ಒಪ್ಪಿಕೊಂಡಿದ್ದಾರೆ. ಆಪರೇಶನ್‍ಗಾಗಿ ಆರು ಸಾವಿರ ಕೊಡುವುದಕ್ಕೆ ಒಪ್ಪಿಸಿದ್ದೀನಿ.”

ಡಾಕ್ಟರ್ :- “ಏನು ? ಕೇವಲ ಆರು ಸಾವಿರಾನಾ ?”

ಕಂಪೌಂಡರ್ :- “ಡಾಕ್ಟ್ರೇ ಅತಿ ಆಸೆ ಒಳ್ಳೇದಲ್ಲ. ಕಿಡ್ನಿ ತೆಗೆದುಕೊಂಡು ಮಾರಿದಾಗ ಬರೋ ಹಣವೇನು ಕಡಿಮೆ ಅಲ್ಲವಲ್ಲ.”

ಡಾಕ್ಟರ್ :- “ ಸರಿ, ಸರಿ” (ಎಂದು ನುಡಿದು, ಜೋರಾಗಿ) “ಸಿಸ್ಟರ್, ಸಿಸ್ಟರ್” (ಕೂಗುತ್ತಾನೆ. ಸಿಸ್ಟರ್ ಒಬ್ಬಳು ಓಡಿ ಬರುತ್ತಾಳೆ.)

ಸಿಸ್ಟರ್ :- “ಎಸ್ ಸರ್…!”

ಡಾಕ್ಟರ್ :- “ನೋಡು, ಆಪರೇಶನ್ ಮಾಡೋದಿದೆ. ಎಲ್ಲಾ ಪ್ರಿಪೇರ್ ಮಾಡಿಡು.”

ಸಿಸ್ಟರ್ :- “ಓ.ಕೆ ಸರ್.”

ಕರುಣೆ ಇಲ್ಲದ ಕಟುಕರು ೨

ದೃಶ್ಯ – ೨


(ದವಾಖಾನೆಯಲ್ಲಿ ಒಂದು ಕಡೆ ಡಾಕ್ಟರ್ ತನ್ನ ರಿವಾಲ್ವಿಂಗ್ ಚೇರ್ ಮೇಲೆ ಕುಳಿತು ನಿದ್ರಿಸುತ್ತಿದ್ದಾನೆ. ಅವನು ತನ್ನ ಮುಖದ ಮೇಲೆ ಕರ್ಚಿಪೊಂದನ್ನು ಹಾಕಿಕೊಂಡಿದ್ದನೆ. ಎತ್ತ ಹೊರಗಡೆ ಸ್ಟೂಲ್ ಒಂದರ ಮೇಲೆ ಕಂಪೌಂಡರ್ ಬೀಡಿ ಸೇದುತ್ತಾ ಕುಳಿತಿದ್ದಾನೆ. ಇನ್ನೊಂದು ಮೂಲೆಯಲ್ಲಿ ಇಬ್ಬರು ನರ್ಸ್‌ಗಳು ನಿಂತಿದ್ದು, ಅವರ ಪಕ್ಕದಲ್ಲಿ ಒಂದು ಬೆಡ್ ಹಾಗೂ ಟೇಬಲ್ ಇದೆ.

ಇಂತಹ ಸಂದರ್ಭದಲ್ಲಿ ಹುಡುಗನನ್ನು ಕರೆದುಕೊಂಡು ತಂದೆ ತಾಯಿ ಇಲ್ಲಿಗೆ ಬರುತ್ತಾರೆ. ಇವರನ್ನು ನೋಡಿದರೂ ನೋಡದಂತೆ ಕಂಪೌಂಡರ್ ತನ್ನ ಬೀಡಿ ಸೇದುವುದರಲ್ಲಿ ಮಗ್ನವಾಗಿದ್ದಾನೆ.)

ರಂಗಣ್ಣ :- “ಡಾಕ್ಟರ್ ಸಾಹೇಬ್ರು ಅದಾರೇನ್ರಿ ಒಳಗ ?”

ಕಂಪೌಂಡರ್ :- “ಏನಾಗ್ಯಾದ್ ?” (ಉದಾಸೀನ ಭಾವದಿಂದ ಕೇಳುತ್ತಾನೆ.)

ರಂಗಣ್ಣ :- “ಏನಿಲ್ರಿ, ಈ ನಮ್ಮ ಕೂಸು ಕೈ ಕೊಯ್ಯಿಕೊಂಡಾತ್ರಿ. ಜರ ಸಾಹೇಬ್ರಿಗ್ ತೋರಿಸ್ಬೇಕಿತ್ರಿ.”

ಕಂಪೌಂಡರ್ :- “ಏನು ? ಇದು ಕೂಸಾ ? ಒಳ್ಳೇ ಮದ್ವಿ ವಯಸ್ಸಿಗೆ ಬಂದಾಂಗ ಕಾಣಸ್ತಾನ್ ಇಂವಾ……. ಇರಲಿ, ಸಾಹೇಬ್ರು ಒಳಗಡೆ ತುಂಬಾ Busy ಹರಾ. ಇಗೆಲ್ಲ ನೋಡಾಕಗಲ್ಲ. ನಾಳಿಗ್ ಕರ್ಕೊಂಬಾ.”

ರಂಗಣ್ಣ :- “ಏ…ss….ಹಾಂಗ್ ಅನ್ನಬ್ಯಾಡ್ರಿ. ಮಗೀನ್ ಕೈಯಿಂದ ರಗುತಾ ಸುರ್ಯಾಕತ್ಯಾದ. ಈಗ್ಲೆ ಡಾಕುಟರ್‌ ಸಾಹೇಬ್ರಿಗ್ ತೋರಿಸ್ಬೇಕು. ಬೇಕಾದ್ರ ನಿಮ್ಮ ಕಾಲೀಗ್ ಬೀಳ್ತಿನ್ರಿ. ಬಡವರ ಕಷ್ಟ ಅರ್ಥ ಮಾಡಿಕೊಳ್ರಿ.” (ಧೀನವಾಗಿ ರಂಗಣ್ಣ ಕೇಳಿಕೊಳ್ಳುತ್ತಾನೆ.)

ಕಂಪೌಂಡರ್ :- “ಏಯ್, ನಿಂದೇನ್ ಪೀಡೆಯೋಪ್. ನಿಲ್ಲು, ಒಳಗಡೆ ಡಾಕ್ಟರ್‍ನ್ನು ನೋಡಿ ಬರ್ತಿನಿ.”

(ಕಂಪೌಂಡರ್ ಒಳಗಡೆ ಹೋಗುತ್ತಾನೆ. ಡಾಕ್ಟರ್ ಮಲಗಿರುವುದನ್ನು ಕಂಡು ತಲೆ ಚಚ್ಚಿಕೊಳ್ಳುತ್ತಾನೆ. ಬಳಿ ಹೋಗಿ, ಕೈ ಹಿಡಿದು ಅಲುಗಿಸುತ್ತಾ…..)

ಕಂಪೌಂಡರ್ :- “ಸಾರ್…ಸಾರ್….ss…” (ಡಾಕ್ಟ್ರ ಪ್ರತಿಸ್ಪಂದಿಸದೆ ಇದ್ದಾಗ) “ಸಾರ್…!” (ಧ್ವನಿಯನ್ನು ಜೋರಾಗಿಸಿ ಕೂಗುತ್ತಾನೆ. ಡಾಕ್ಟರ್ ಹಾರಿಬಿದ್ದಂತೆ ನಟಿಸುತ್ತಾ ಎದ್ದು ಕೂಡುತ್ತಾನೆ. ಕಂಪೌಂಡರ್‍ನತ್ತ ಕೆಂಗಣ್ಣು ಬೀರುತ್ತಾ……)

ಡಾಕ್ಟರ್ :- “ಏನೋ ನಿಂದು ಗೋಳು ? ಮಧ್ಯಾಹ್ನದ ಹೊತ್ತಿನಲ್ಲಿ ಒಂದಿಷ್ಟು Rest ತೆಗೆದುಕೊಳ್ಳುವುದಕ್ಕೂ ನೀ ಬಿಡಲ್ವಲ್ಲ.”

ಕಂಪೌಂಡರ್ :- “ಸಾರ್, ಪೇಶಂಟ್ ಬಂದಿದೆ. Rest ಆಮೇಲೆ ಮಾಡಿವಿರಂತೆ. ಮೊದಲು ಡ್ಯೂಟಿ ಮಾಡಿ.”

ಡಾಕ್ಟರ್ :- “ಡ್ಯೂಟಿ ? ಇಂಡಿಯಾದಾಗ್ ಯಾರಾದ್ರೂ ಇನ್ನೂ ಮಾಡ್ತಾರೇನಪ ಅದು ? (ಎಂದು ವ್ಯಂಗ್ಯವಾಗಿ ನುಡಿದು) ….. ಇರಲಿ, ಪೇಶಂಟ್ ಅಂದ್ಯಲ್ಲ, ಏನ್ ಕೇಸ್ ಅದು ?”

ಕಂಪೌಂಡರ್ :- “ಒಂದು ಹುಡುಗನ ಕೈಗೆ ಸಣ್ಣ ಗಾಯ ಆಗ್ಯಾದ್ ರೀ.”

ಡಾಕ್ಟರ್ :- “ಏನೂ ? ಒಂದು ಸಣ್ಣ ಗಾಯಕ್ಕೆ ನಾನ್ Treat ಮಾಡ್ಬೇಕಾ ? ತೆಲಿಗಿಲಿ ಕೆಟ್ಟದೇನ್ ನಿಂದು ? M.B.B.S ಪಾಸ್ ಮಾಡಿ, M.D ಮಾಡಿ, ಇಷ್ಟು ಸಣ್ಣ ಕೇಸ್ ನಾ ಹ್ಯಾಂಡಲ್ ಮಾಡಬೇಕಾ ?”

ಕಂಪೌಂಡರ್ :- “ಡಾಕ್ಟ್ರೇ, ಕೇಸ್ ಎಷ್ಟು ದೊಡ್ಡದೂಂತ ನೋಡ್ಬೇಡಿ. ದುಡ್ಡು ಎಷ್ಟು ಬರುತ್ತೇಂತ ನೋಡಿ”

ಡಾಕ್ಟರ್ :- “ಅಷ್ಟು ಸಣ್ಣ ಕೇಸ್‍ನಲ್ಲಿ ಅದೆಷ್ಟೋ ದುಡ್ಡು ಬರುತ್ತೆ ?”

ಕಂಪೌಂಡರ್ :- “ದುಡ್ಡು ತಾನಾಗೇ ಬರೋದಿಲ್ಲ ಡಾಕ್ಟ್ರೇ, ದುಡ್ಡು ಬರೋ ಹಾಗೇ ಮಾಡ್ಬೇಕು…… ಒಂದು ಸೆಕೆಂಡ ನಿಲ್ಲಿ, ನನಗ್ ಯೋಚಿಸ್ಲಿಕ್ ಬಿಡಿ……” (ಯೋಚಿಸುತ್ತಿರುವಂತೆ ಮುದ್ರೆಯಲ್ಲಿ ನಿಲ್ಲುತ್ತಾನೆ) “ಇವತ್ತನಾಳೆ ಒಂದು ಕಿಡ್ನಿ ಬೆಲೆ ಎಷ್ಟು ಡಾಕ್ಟ್ರೇ ?”

ಡಾಕ್ಟರ್ :- “ ಐವತ್ತರಿಂದ ಒಂದು ಲಕ್ಷ.”

ಕಂಪೌಂಡರ್ :- “ಸರಿ ಹಾಗಾದ್ರೆ, ಹುಡುಗನ ಕಿಡ್ನಿ ತೆಗೆದುಕೊಳ್ಳೋಣ. ಹೇಗಿದ್ರೂ ದೇವರು ಎರಡು ಕಿಡ್ನಿ ಕೊಟ್ಟಿರುತ್ತಾನಲ್ಲ. ಒಂದು ತೆಗೆದ್ರೂ ಏನೂ ಆಗಲ್ಲ.”

ಡಾಕ್ಟರ್ :- “ಓಹೋ, ಹಾಗೇನು, ಗುಡ್ ಐಡಿಯಾ, ಗುಡ್ ಐಡಿಯಾ.”

ಕಂಪೌಂಡರ್ :- “ ಈ ಕಿಡ್ನಿ ಆಪರೇಶನ್‍ಗೊಸ್ಕರಾನೂ ನಾನು ಹಣ ವಸೂಲಿ ಮಾಡ್ತಿನಿ, ನೋಡ್ತಾ ಇರಿ.” (ಎಂದೆನ್ನುತ್ತಾ ಹೊರ ಬರುತ್ತಾನೆ. ಬಂದು…..)

ಕಂಪೌಂಡರ್ :- “ನೋಡಪ್ಪ, ಡಾಕ್ಟರ್ ಹೇಳ್ತಾ ಇದ್ದಾರೆ, ನಿಮ್ಮಗುಂದು ಕೈಗಿ ಬ್ಯಾಂಡೇಜ್ ಕಟ್ಟುವುದಷ್ಟೇ ಅಲ್ಲ, ಫ್ರೀಯಾಗಿ ಫುಲ್ ಬಾಡಿ ಚೆಕಪ್ ಮಾಡ್ತಾರಂತ. ನೀನೇನಂತಿ ?”

ರಂಗಣ್ಣ :- “ಅಬ್ಬಾ ! ಡಾಕ್ಟರ್ ಸಾಹೇಬ್ರು ದೇವರಿಗಿಂತ ದೊಡ್ಡವರದಾರಲ್ಲ. ಈ ಕಾಲದಲ್ಲಿ ಫ್ರೀಯಾಗಿ ಯಾರು ಚೆಕಪ್ ಮಾಡ್ತಾರೆ ? ನಂದೇನು ಹೇಳೋದಿದೆ, ಚೆಕಪ್ ಮಾಡು ಅಂತ ಹೇಳು.”

ಕರುಣೆ ಇಲ್ಲದ ಕಟುಕರು ೧

“ಕರುಣೆ ಇಲ್ಲದ ಕಟುಕರು”

ದೃಶ್ಯ - ೧

(ಹತ್ತು/ಹನ್ನೇರಡು ವರ್ಷದ ಹುಡುಗನೊಬ್ಬ ಕೈಯಲ್ಲಿ ಸಣ್ಣ ಚಾಕುವೊಂದನ್ನು ಹಿಡಿದು ಸೇಬು ಹಣ್ಣೊಂದನ್ನು ಕೊಯುತ್ತಿದ್ದಾನೆ. ಅಕಸ್ಮಾತ್ ಎಂಬಂತೆ ಚಾಕು ಅವನ ತೋರು ಬೆರಳಿಗೆ ತಾಗಿದಂತಾಗಿ ರಕ್ತ ಸುರಿಯಲಾರಂಭಿಸುತ್ತದೆ.)

ಶರಣು :- “ಅಯ್ಯೋ….ss…ಅಮ್ಮಾ….ಊಂ…ಊಂ….ಊಂ….!”

(ಜೋರಾಗಿ ಅಳುತ್ತಾನೆ. ಹುಡುಗನ ತಾಯಿ ಅಡಿಗೆ ಮನೆಯಿಂದ ಹೊರ ಓಡಿ ಬರುತ್ತಾ….)

ಶಾಂತಮ್ಮ :- “ಶಾಣ್ಯಾ….. ಯಾಕೋ ಅಳ್ತಾ ಇದ್ದೀಯಾ ? ಏನಾಯ್ತೋ ?” (ಹುಡುಗನ ಕೈ ಮೇಲೆ ದೃಷ್ಟಿ ಬೀಳುತ್ತಲೆ…) “ಅಯ್ಯಿ, ನಿನ್ನ ಬಾಯಾಗ ಮಣ್ಣ ಹಾಕಾ, ಕೈಗ್ ಏನ್ ಮಾಡಿಕೊಂಡ್ಯೋ ? ರಗುತಾ ಬರ್ತಾ ಇದ್ಯೇಲ್ಲ.”

ಶರಣು :- “ನಾ….. ನಾ….. ಏನೂ ಮಾಡಿಲವ್ವಿ, ಈ ಚಾಕೂನೆ ನನ್ನ ಕೈ ಕತ್ತುರಿಸ್ಯಾದ….. ಊಂ….. ಊಂ….” (ಗಾಯವಾದ ಕೈಯನ್ನು ಜಾಡಿಸುತ್ತಾ ಹುಡುಗ ನುಡಿಯುತ್ತಾನೆ.)

ಶಾಂತಮ್ಮ :- “ಒಂದು ಗಳಗಿ ಸುಮ್ಮ ಕುಡಲ್ಲಂತಿಯಲ್ಲೋ ನೀ…. ನೋಡು ರಗುತ ಹ್ಯಾಂಗ್ ಸುರ್ಯಾಕತ್ತಾದ್. ನಿಂದರ್, ನಿಮ್ಮಪ್ಪಗ್ ಕರೀತೀನಿ. ದಾವಾಖಾನಿಗ್ ಹೋಗೊಣಂತ….. (ಹೊರಗಡೆ ನೋಡುತ್ತಾ) ಏನ್ರೀ, ಇಲ್ಲಿ ಬರ್ರ್ರೀ, ಇಂವಾ ಶಾಣ್ಯಾ ನೋಡ್ರಿ ಏನ್ ಮಾಡಿಕೊಂಡಾನ್”

(ತಂದೆಯ ಪ್ರವೇಶವಾಗುತ್ತೆ. ಮಗನ ಕೈಯನ್ನುನೋಡುತ್ತಲೆ…..)

ರಂಗಣ್ಣ :- “ಕತ್ತಿ ಇದ್ದಿ ಮನ್ಶಾ ಇದ್ದೇಯಲೆ ನೀ ? ಕುಳಾ ತಿಂದು ಮನ್ಯಾಗ್ ಸುಮ್ಮ ಇರಕ್ ಬರಂಗಿಲ್ಲೇನ್ ನಿಂಗ ?...... ನಡಿ ಮಗನಾ ದವಾಖಾನೀಗ್ ಈಗ್. ಅಲ್ಲಿ ಸೂಜಿ ಚುಚ್ಚತಾರ್ ಚುಚ್ಚಿಸ್ಕೊಮಕತ್ತಿ. ಅವಾಗ್ ನಿನಗ್ ಅರು ಬರ್ತಾದ್.”

(ತಂದೆ ಸಿಟ್ಟಿನಿಂದ ನುಡಿದು, ಮಗ ಮತ್ತು ಹೆಂಡತಿಯ ಜೊತೆ ಸ್ಟೇಜ್ ಕೆಳಗಿಳಿದು ಹೊರಬರುತ್ತಾನೆ.)

Saturday, October 29, 2011

ಬಣ್ಣದ ಚಿಟ್ಟೆ - ಭಾಗ 4


ಬಣ್ಣದ ಚಿಟ್ಟೆ - ಭಾಗ 1

ಬಣ್ಣದ ಚಿಟ್ಟೆ - ಭಾಗ 2

ಬಣ್ಣದ ಚಿಟ್ಟೆ - ಭಾಗ 3



“ನಮ್ಮ ಮದುವೆಗೂ ಮುಂಚೆಯೆ ಹೇಳಿದ್ದೇನಲ್ಲ, ಬಣ್ಣದ ಚಿಟ್ಟೆಯ ಬಗ್ಗೆ. ಇವಳು ಅವಳೇ.”

“ಓಹ್ ! ಇವಳೇನಾ ಅವಳು ?” ಒಂದು ಕ್ಷಣ ಬಿಟ್ಟು, “ತಪ್ಪು ಮಾಡಿರೋದು ಅವಳು, ನಾವಲ್ಲ. ನಾವ್ಯಾಕೆ ಅವಳನ್ನು ಕಂಡು ಬೇರೆ ಅಂಗಡಿಗೆ ಹೋಗಬೇಕು ? ಬನ್ನಿ, ನಾವು ಅದೇ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡೋಣ” ತ್ರಿವೇಣಿ ನುಡಿದಳು.

ಮೆಟ್ಟಲುಗಳ ಮೇಲೆ ನಿಂತಿದ್ದ ಅವಳು ಕೇವಲ ‘ನನ್ನ’ ಭೂತಕಾಲಕ್ಕೆ ಮಾತ್ರ ಸಂಬಂಧಿಸಿದ್ದಳು. ಆದರೆ ತ್ರಿವೇಣಿ ಮಾತನಾಡುವಾಗ ‘ನಾವು’ ಎಂಬ ಪದವನ್ನು ಬಳಸಿದ್ದಳು. ಇದು ಅವಳಿಂದ ನಾನು, ನನ್ನಿಂದ ಅವಳು ಬೇರೆಯಲ್ಲ ಎಂಬುದನ್ನು ಅವ್ಯಕ್ತವಾಗಿ ಸೂಚಿಸುತಿತ್ತು. ಬಣ್ಣದ ಚಿಟ್ಟೆಗೂ ತ್ರಿವೇಣಿಗೂ ಹೋಲಿಸಿ ನೋಡಿದೆ. ಭೂಮಿ – ಆಕಾಶದಷ್ಟು ಅಂತರ ಕಂಡು ಬಂತು. ನಾನು ಪ್ರತಿಯಾಗಿ ಮಾತನಾಡಬೇಕೆನ್ನುವಷ್ಟರಲ್ಲೆ ಯಾರೊ ಹಿಂದಿನಿಂದ ನನ್ನ ಭುಜಕ್ಕೆ ಡಿಕ್ಕಿ ಹೊಡೆದರು.

“ಏಯ್ ! ಸ್ವಲ್ಪ ನೋಡಿಕೊಂಡು ಹೋಗಿ” ನಾನು ಜೋರಾಗಿ ನುಡಿದೆ.

“Sorry ಸರ್, sorry” ಆ ವ್ಯಕ್ತಿ ಹಿಂದಕ್ಕೆ ತಿರುಗಿ ನುಡಿದ.

ನಾನು ಅವನನ್ನು ಎಲ್ಲಿಯೊ ನೋಡಿದ್ದೇನೆಂದೆನಿಸಿತು. ಆದರೆ ಎಲ್ಲಿಯಂತ ನೆನಪಿಗೆ ಬರಲಿಲ್ಲ. ಎಷ್ಟೆ ಯೋಚಿಸಿದರೂ ಅವನ್ಯಾರು ಎಂಬುದು ಹೊಳೆಯಲಿಲ್ಲ. ಅವನು ನೇರವಾಗಿ ಹೋಗಿ ಬಣ್ಣದ ಚಿಟ್ಟೆ ಮುಂದೆ ಹೋಗಿ ನಿಂತನು. ಅವಳು ಅವನ್ನು ಕಂಡು ಗಾಬರಿಯಾದಂತೆ ತೋರಿತು. ಅವನು ಅವಳ ಜೊತೆ ಏನನ್ನೊ ಮಾತನಾಡತೊಡಗಿದ. ಆದರೆ ಧ್ವನಿ ಮಾತ್ರ ನಾವು ನಿಂತಲ್ಲಿನವರೆಗೂ ಕೆಳಿಸಿ ಬರಲಿಲ್ಲ.

“ಯಾರವನು ?” ತ್ರಿವೇಣಿ ಪ್ರಶ್ನಿಸಿದಳು.

ಅದನ್ನೇ ನಾನೂ ಯೋಚಿಸುತ್ತಿರುವೆ. ಎಲ್ಲಿಯೊ ನೋಡಿದ ನೆನಪು. ಆದರೆ ಎಲ್ಲಿ ಅಂತ ನೆನಪಿಗೆ ಬರುತ್ತಿಲ್ಲ”

“ಯಾರಾದರೇನು, ಬನ್ನಿ, ನಾವು ನಮ್ಮ ಕೆಲಸ ನೋಡೊಣ” ಎನ್ನುತ್ತಾ ತ್ರಿವೇಣಿ ದೇವಾನಂದ ಸಾರಿ ಸೆಂಟರ್ ನತ್ತ ಹೆಜ್ಜೆ ಹಾಕಿದಳು. ನಾನು ಅವಳನ್ನು ಅನುಸರಿಸಿದೆ.

ನಾವು ಎಂಟಡಿ ಮುಂದಕ್ಕೆ ಹೋದಾಗ, ಅವನು ತನ್ನ ಜೇಬಿನಿಂದ ಪಿಸ್ತೂಲು ತೆಗೆಯುತ್ತಿರುವುದು ಕಂಡು ಬಂತು. ನಾನು ತ್ರಿವೇಣಿಯನ್ನು ಮುಂದೆ ಹೆಜ್ಜೆ ಇಡದಂತೆ ತಡೆದೆ.

“ಥೂ ! ವೇಶ್ಯೆಗಿಂತಲೂ ಕೀಳು ನೀನು. ನಿನ್ನಂತಹ ನಾಯಿಗೆ ಈ ಜಗತ್ತಿನಲ್ಲಿ ಇರಲು ಯಾವ ಯೋಗ್ಯತೆ ಕೂಡ ಇಲ್ಲ.” ಎನ್ನುತ್ತಾ ಅವನು ಅವಳ ಎದೆಗೆ ಪಿಸ್ತೂಲಿನಿಂದ ಗುರಿ ಇಟ್ಟನು.

“ಬೇಡ, ನನ್ನನ್ನು ಕೊಲ್ಲಬೇಡ” ಅವಳು ಭಯದಿಂದ ನುಡಿದಳು.

‘ಛಾಂಯ್…..ss… ಛಾಂಯ್…..ss… ಛಾಂಯ್….ss… ಛಾಂಯ್…..ss… ಛಾಂಯ್…..ss… ಛಾಂಯ್’

ಅವನು ಅವಳ ಮೇಲೆ ಕಿಂಚಿತ್ತೂ ಕರುಣೆ ತೋರಿಸದೆ ಒಟ್ಟು ಆರು ಬಾರಿ ಟ್ರಿಗರ್ ಎಳಿದಿದ್ದನು. ಅವಳು ಕುಸಿದು ಬಿದ್ದಳು. ಮೆಟ್ಟಿಲುಗಳೆಲ್ಲ ರಕ್ತ ರಂಜಿತವಾದವು. ಅವನ ಕೈಯಿಂದ ಪಿಸ್ತೂಲು ಜಾರಿ ನೆಲಕ್ಕೆ ಬಿತ್ತು. ಅವನು ಅಲ್ಲಿಯೆ ಕುಸಿದು ಕುಳಿತ. ತನ್ನೆರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಸಣ್ಣದಾಗಿ ರೋಧಿಸತೊಡಗಿದ. ನೋಡು – ನೋಡುತ್ತಿದ್ದಂತೆ ಜನ ಜಮಾಯಿಸತೊಡಗಿತು. ನಾನು ಮತ್ತು ತ್ರಿವೇಣಿ ಇದನ್ನೆಲ್ಲ ಕಿಂಕರ್ತವ್ಯವಿಮೂಡರಾಗಿ ನೋಡುತ್ತಾ ನಿಂತಿದ್ದೇವು. ಕಣ್ಮುಂದೆಯೆ ಸಿನಿಮಿಯವಾಗಿ ಒಂದು ಕೊಲೆ ನಡೆದು ಹೋಗಿತ್ತು. ನಾವು ಅದಕ್ಕೆ ಸಾಕ್ಷಿಯಾಗಿದ್ದೇವು.

ಸುಮಾರು ಹದಿನೈದು ನಿಮಿಷಗಳ ನಂತರ ಪೊಲಿಸ್ ಜೀಪೊಂದು ಬಂದು ನಿಂತಿತು. ಅದರಲ್ಲಿನಿಂದ ಒಬ್ಬ ಇನ್ಸಪೆಕ್ಟರ್ ಹಾಗೂ ಮೂವರು ಪೇದೆಗಳು ಕೆಳಗಿಳಿದರು. ಅವರೆಲ್ಲ ನೇರವಾಗಿ ದೇವಾನಂದ ಸಾರಿ ಸೆಂಟರ್ ನತ್ತ ನಡೆದು ಬಂದರು.

“ಯಾರು ಕೊಲೆ ಮಾಡಿದ್ದು ?” ಇನ್ಸಪೆಕ್ಟರ್ ಸುತ್ತಲೂ ನೆರೆದಿದ್ದವರನ್ನು ನೋಡುತ್ತಾ ಪ್ರಶ್ನಿಸಿದ. ಗುಂಪಿನಲ್ಲಿ ಹಿಂದೆ ನಿಂತಿದ್ದವರು ಜಾಗಾ ಖಾಲಿ ಮಾಡತೊಡಗಿದರು. ನಮಾಜ್ ಮಾಡಲು ಹೋಗಿ ಮಸೀದಿ ಕೊರಳಿಗೆ ಕಟ್ಟಿಕೊಳ್ಳುವುದು ಯಾರಿಗೂ ಬೇಕಿರಲಿಲ್ಲ. ನಾನೇ ಉತ್ತರಿಸಬೇಕೆಂದುಕೊಳ್ಳುತ್ತಿರುವಾಗಲೆ –

“ನಾನೇ ಸರ್ !” ಅವನು ನುಡಿದ. ಅವನ ಧ್ವನಿ ಆಶ್ಚರ್ಯಕರ ರೀತಿಯಲ್ಲಿ ಶಾಂತವಾಗಿತ್ತು.

“ಯಾರು ನೀನು ? ಇವಳಿಗೂ ನಿನಗೂ ಏನು ಸಂಬಂಧ ?” ಒಮ್ಮೆ ಹೆಣದ ಕಡೆ ನೋಡಿ, ಅವನ ಮೇಲೆ ತನ್ನ ದೃಷ್ಠಿಯನ್ನು ಕೇಂದ್ರಿಕೃತಗೊಳಿಸುತ್ತಾ ಇನ್ಸಪೆಕ್ಟರ್ ಕೇಳಿದ.

“ಇವಳು ನನ್ನ ಹೆಂಡ್ತಿ ಸರ್.” ಅವನು ಉತ್ತರಿಸಿದ.

ನನಗೆ ತಕ್ಷಣ ಫ್ಲ್ಯಾಶ್ ಆಯಿತು. ಅಂದರೆ ಇವನು ರವೀಂದ್ರ, ಆರು ವರ್ಷಗಳ ಹಿಂದೆ ಆ ದಿನ ಸಂಜೆ ಅವಳ ಜೊತೆ ಕಾರಿನಲ್ಲಿ ಬಂದಿದ್ದವನು.

“ಯಾಕೆ ಕೊಲೆ ಮಾಡಿದೆ ?” ಇನ್ಸಪೆಕ್ಟರ್ ಪ್ರಶ್ನಿಸಿದ.

“ಇಂತಹವಳನ್ನು ಹೆಂಡ್ತಿಯಾಗಿ ಕಟ್ಟಿಕೊಂಡರೆ ಕೊಲೆ ಅಲ್ಲದೆ ಇನ್ನೇನು ತಾನೆ ಮಾಡಲು ಸಾಧ್ಯ ಸರ್ ? ಆರು ವರ್ಷಗಳಿಂದ ಇವಳ ಚೆಲ್ಲಾಟ ನೋಡಿ – ನೋಡಿ ಸಾಕಾಗಿ ಕೊನೆಗೆ ಇವಳನ್ನು ಮುಗಿಸುವ ನಿರ್ಧಾರ ಕೈಗೊಂಡೆ.” ಅವನು ಉತ್ತರಿಸಿದ.

ಇನ್ಸಪೆಕ್ಟರ್ ಅವನ ಕೈಗೆ ಬೇಡಿ ತೊಡಿಸಿ ಅವನನ್ನು ಒಬ್ಬ ಪೇದೆಯ ಕೈಗೆ ಒಪ್ಪಿಸಿದ. ಆನಂತರ ವಾಯರ್ಲೆಸ್ ನಲ್ಲಿ ಏನನ್ನೊ ಮಾತನಾಡತೊಡಗಿದ.

ನಾನು ತ್ರಿವೇಣಿಯ ಮುಖ ನೋಡಿದೆ. ಅವಳ ಮುಖದಲ್ಲಿ ವಿಷಾಧದ ಭಾವಗಳಿದ್ದವು.

“ಏನು ಮಾಡೋಣ ತ್ರಿವೇಣಿ ?” ನಾನು ಕೇಳಿದೆ.

“ಶಾಪಿಂಗ್ ಮುಂದಿನ ವಾರ ಮಾಡಿದರಾಯಿತು. ಮೊದಲು ಇಲ್ಲಿಂದ ಮನೆಗೆ ಹೋಗೊಣ ಬನ್ನಿ.” ಅವಳು ನುಡಿದಳು.

ನಾನು ಒಂದು ನಿಟ್ಟುಸಿರು ಬಿಟ್ಟು ಪಾರ್ಕಿಂಗ್ ಝೋನ್ ನತ್ತ ಹೆಜ್ಜೆ ಹಾಕಿದೆ. ಆರು ವರ್ಷಗಳ ಹಿಂದೆ ಆ ಬಣ್ಣದ ಚಿಟ್ಟೆ ನನ್ನನ್ನು ತಿರಸ್ಕರಿಸಿ ಹೋದದ್ದು ಒಳ್ಳೇಯದೆ ಆಗಿತ್ತು. ಒಂದು ವೇಳೆ ಅವಳು ನನ್ನ ಮಡದಿಯಾಗಿದ್ದಿದ್ದರೆ ಈ ದಿನ ರವೀಂದ್ರನ ಬದಲಿಗೆ ಆ ಇನ್ಸಪೆಕ್ಟರ್ ನನ್ನ ಕೈಗೆ ಬೇಡಿ ತೊಡಿಸುತ್ತಿದ್ದನೇನೋ ಯಾರಿಗೆ ಗೊತ್ತು. ದೇವರು ನನ್ನಿಂದ ಆ ಬಣ್ಣದ ಚಿಟ್ಟೆಯನ್ನು ದೂರ ಮಾಡಿದ್ದರಿಂದ ನಾನು ಅವನಿಗೆ ಎಂದಿಗೂ ಚಿರರುಣಿ….!