Copy Right...!

I firstly declare here that all the content written in the blog is exclusively written by me and I hold the copyrights of each and everything. Be it a poem or a novel or a story are exclusively owned by me. This declaration is important in a world that seems so worried of piracy.

Friday, October 28, 2011

ಬಣ್ಣದ ಚಿಟ್ಟೆ - ಭಾಗ 2

ನೀಲಿ ಬಣ್ಣದ ಕಾರು ಯಾರದು ? ಅವಳು ಕಾರಿನಲ್ಲಿ ಯಾಕೆ ಬಂದಿದ್ದಾಳೆ ? ಕಾರು ನಡೆಸುತ್ತಿರುವುದು ಯಾರು ? ಇಂತಹ ಹಲವಾರು ಅನುತ್ತರಿತ ಪ್ರಶ್ನೆಗಳು, ಭ್ರಂಗಿಯ ಹುಳು ಕಟ್ಟಿಗೆಯನ್ನು ಕೊರೆಯುವಂತೆ, ನನ್ನ ಮೆದುಳನ್ನು ಕೊರೆಯತೊಡಗಿದವು. ಅವಳು ನಾನು ಇದ್ದಲ್ಲಿಗೆ ನಡೆದು ಬಂದಾಗ ಸೈಕಲ್ ಮೇಲಿನಿಂದ ಕೆಳಗಿಳಿದೆ.

"ಯಾಕೆ ತಡ ಮಾಡಿದೆ ?" ಧ್ವನಿಯಲ್ಲಿ ಕೋಪದ ಛಾಯೆಯೊಂದಿಗೆ ಕೇಳಿದೆ.

"ತಡ ಯಾಕೆ ಮಾಡಿದೆಯಂತ ಕೆಳುವುದಕ್ಕಿಂತಲೂ ಯಾಕೆ ಬಂದೆಯಂತ ಕೇಳಬೇಕು ನೀನು" ಅವಳು ಮುಗುಳುನಗೆಯೊಂದಿಗೆ ನುಡಿದಳು.

"ನಿನ್ನ ಮಾತು ನಗರ್ಥವಾಗಲಿಲ್ಲ" ನಾನು ಅಸಮಂಜಸದಿಂದ ನುಡಿದೆ.

"ನಿನಗೆ ನನ್ನ ಯಾವ ಮಾತು ಅರ್ಥವಾಗಿದೆಯಂತ ಮಾತು ಅರ್ಥವಾಗುತ್ತೆ ? ಅದೇನೇ ಇರಲಿ, ಇದು ನಮ್ಮ ಕೊನೆಯ ಭೇಟಿ ; ಇನ್ನು ಮುಂದೆ ನನ್ನನ್ನು ಮಾತನಾಡಿಸುವುದಕ್ಕೆ, ಭೇಟಿಯಾಗುವುದಕ್ಕೆ ಪ್ರಯತ್ನಿಸಬೇಡಾಂತ ಹೇಳಲಿಕ್ಕೆ ಬಂದೆ" ಅವಳು ನುಡಿದಳು.

"ಏನು ಹೇಳುತ್ತಿರುವೆ ನೀನು ? ನಿನಗೆನದರೂ ಹುಚ್ಚು ಹಿಡಿದಿದೆಯಾ ?" ಸರಿಸುಮಾರು ನನ್ನ ಧ್ವನಿ ಕಿರಿಚುವ ಮಟ್ಟದಲ್ಲಿತ್ತು.

"ಕಿರುಚ್ಬೇಡ. ನನಗನ್ನಿಸಿದ ಮಟ್ಟಿಗೆ ನಿನಗೆ ಕನ್ನಡ ಚೆನ್ನಾಗಿಯೇ ಅರ್ಥವಾಗುತ್ತೆ. ನಾನು ಮಾತನಾಡ್ತಾಯಿರೋದು ಕೂಡ ಕನ್ನಡದಲ್ಲಿಯೇ. ಕಿವಿ ಏನಾದರೂ ಕಿವುಡಾಗಿದ್ದರೆ ಇನ್ನೊಮ್ಮೆ ಜೋರಾಗಿ ಹೇಳುತ್ತೇನೆ ಕೇಳು, ಇದು ನಮ್ಮ ಕೊನೆಯ ಭೇಟಿ. ಇನ್ನು ಮುಂದೆ ನನ್ನನ್ನು ಭೇಟಿಯಾಗುವುದಕ್ಕೆ ಪ್ರಯತ್ನಿಸಬೇಡ" ಅವಳು ತನ್ನ ಧ್ವನಿ ಎತ್ತರಿಸಿ ನುಡಿದಳು.

"ಮತ್ತೇ ನೀನು ನನ್ನನ್ನು ಪ್ರೀತಿಸ್ತಾ ಇಲ್ವಾ ? ನನ್ನನ್ನು ಮದುವೆಯಾಗುವುದಿಲ್ಲವಾ ?" ನನ್ನ ಧ್ವನಿಯಲ್ಲಿ ಕಂಪನವಿತ್ತು.

"ಪ್ರೀತಿ.... ಮದುವೆ.... ಆಹ್ಹಾ... ಹ್ಹಾ... ಹ್ಹಾ" ಜೋರಾಗಿ ನಗುತ್ತಾ ಅವಳು ವ್ಯಂಗ್ಯವಾಗಿ ಮಾತನಾಡತೊಡಗಿದಳು, "ತುಂಬಾ ಒಳ್ಳೆ ಜೋಕ್ ಮಾಡ್ತೀಯಾ ನೀನು. ಏನಿದೆ ನಿನ್ನ ಹತ್ತಿರ ? ರೂಪಾವಿದೆಯಾ ?...........ಇಲ್ಲ. ಹಣವಿದೆಯಾ ?..........ಇಲ್ಲ. ಕಾರು, ಬಂಗಲೆ ಇದೆಯಾ ?........ಇಲ್ಲ. ಸಮಾಜದಲ್ಲಿ ಒಳ್ಳೆ ಸ್ಥಾನದವಿದೆಯಾ ?......ಅದೂ ಇಲ್ಲ. ಹೋಗಲಿ, ಕೊನಗೆ ಇರಲಿಕ್ಕೆ ಒಂದು ಸ್ವಂತ ಮನೆ ಇದೆಯಾ ?........ಅದೂ ಕೂಡ ಇಲ್ಲ. ಹೀಗಿರುವಾಗ ನಾನು ನಿನ್ನಲ್ಲಿ ಏನನ್ನು ಕಂಡು ಮದುವೆ ಆಗಬೇಕು ?"

"ನನ್ನಲ್ಲಿ ವಿದ್ಯೆ, ಬುದ್ಧಿ ಹಾಗೂ ಒಳ್ಳೆ ಮನಸ್ಸಿದೆ" ನಾನು ತೊದಲುತ್ತ ನೀಡಿದೆ.

"ಅವುಗಳನ್ನೆಲ್ಲಾ ಕಟ್ಟಿಕೊಂಡು ನಾನೇನು ಮಾಡಲಿ ? ಅಗರಬತ್ತಿ ಹಚ್ಚಿ, ಆರತಿ ಬೆಳಗಿ, ಪೂಜೆ ಮಾಡಲೇನು ?"

ಅವಳ ಒಂದೊಂದು ಶಬ್ದಗಳೂ ನನ್ನೆದೆಯಲ್ಲಿ ಭರ್ಚಿಯಿಂದ ಖಚಖಚನೆ ತಿವಿಯುತ್ತಿದ್ದವು. ಅದಾಗಲೇ ನನ್ನ ಕಣ್ಣುಗಳೆರಡೂ ತಿಳಿ ನೀರಿನಿಂದ ತುಂಬಿಕೊಳ್ಳಲು ಆರಂಭಿಸಿದ್ದವು.

"ನೀನು ನನ್ನನ್ನು ಪ್ರೀತಿಸುತ್ತಿರುವುದು ಸುಳ್ಳಾ ?" ನಾನು ಕೇಳಿದೆ.

"ಯಾವ ಪ್ರೀತಿ ? ಎಂತಹ ಪ್ರೀತಿ ? ಪ್ರೀತಿಯ ಹೆಸರಿನಲ್ಲಿ ಹಾಳು ಬಾವಿಯ ಕೆಸರಿನಲ್ಲಿ ಬೀಳುವ ಮೂರ್ಖರ ಗುಂಪಿಗೆ ಸೇರಿಲ್ಲ ನಾನು. ನಿನಗೆ ಈಗಲೂ ಅರ್ಥವಾಗಲಿಲ್ಲವೆಂದರೆ...... ಒಂದು ಸೆಕೆಂಡ್ ನಿಲ್ಲು" ಎನ್ನುತ್ತಾ, "ರವಿ !" ಕಾರಿನತ್ತ ಮುಖ ಮಾಡಿ ಕೂಗಿದಳು.

ಕಾರಿನಿಂದ ಒಬ್ಬ ಸ್ಫುರದ್ರೂಪಿ ಯುವಕ ಕೆಳಗಿಳಿದ. ಅವನ ವೇಷ-ಭೂಷಣದಿಂದ ಅವನೊಬ್ಬ ಶ್ರೀಮಂತನೆಂಬುದು ಗೋಚರಿಸುತ್ತಿತ್ತು. ದುಬಾರಿ ಬೆಲೆಯ ಬಟ್ಟೆ ತೊಟ್ಟಿದ್ದ. ಕಾಲುಗಳಿಗೆ ಕಪ್ಪು ಬಣ್ಣದ 'ಇಂಪೋರ್ಟೆಡ್' ಬೂಟು ಹಾಕಿಕೊಂಡಿದ್ದ. ಕಣ್ಣುಗಳು 'ರೆಬ್ಯಾನ್ ಗಾಗಲ್' ನಿಂದ ಮುಚ್ಚಿ ಹೋಗಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಅವನನ್ನು ನನ್ನೊಂದಿಗೆ ಹೋಲಿಸಿದರೆ ನಾನು ಭಿಕ್ಷುಕನೆ ಸರಿ. ಅವನು ನೇರವಾಗಿ ಬಂದು ಅವಳ ಪಕ್ಕದಲ್ಲಿ ನಿಂತನು.

"ಇವರು ನನ್ನ 'Would Be'. ಹೆಸರು ರವೀಂದ್ರ ಅಂತ. ಇವರಲ್ಲಿ ನನಗೆ ಬೇಕಾದ್ದು ಎಲ್ಲವೂ ಇದೆ. ರೂಪ, ಹಣ, ಬಂಗಲೆ, ಕಾರು, ಸಮಾಜದಲ್ಲಿ ಒಳ್ಳೆ ಸ್ಟೇಟಸ್........ ಎಲ್ಲವೂ ಇದೆ. ಇಂತಹವರು ಮಾತ್ರ ನಿಜವಾದ ಪ್ರೀತಿಗೆ ಅರ್ಹರು." ಅವನ ಭುಜದ ಮೇಲೆ ತನ್ನ ಕೈಯನಿಡುತ್ತಾ ಅವಳು ನುಡಿದಳು.

ಅದೇಕೋ ನನಗೆ ತಕ್ಷಣ ಬಣ್ಣದ ಚಿಟ್ಟೆಯ ನೆನಪಾಯಿತು. ಅದು ಹೂವಿನಿಂದ ಹೂವಿಗೆ ಹಾರಿದರೆ, ಇವಳು ಗಂಡಿನಿಂದ ಗಂಡಿಗೆ ಹಾರುತ್ತಿದ್ದಾಳೆ. ಅವಳಿಗಿಂತ ನನಗೆ ಅವನ ಮೇಲೇ ಹೆಚ್ಚು ಆಶ್ಚರ್ಯವಾಯಿತು. ಅವಳ ಗುಣಗಳನ್ನು ಪ್ರತ್ಯಕ್ಷವಾಗಿ ಕಾಣುತ್ತಿದ್ದರು ಕೂಡ ಅದು ಹೇಗೆ ಅವನು ಅವಳನ್ನು ಮದುವೆ ಆಗಲು ಒಪ್ಪಿಕೊಳ್ಳುತ್ತಿದ್ದಾನೋ ? ಅಥವಾ ಅವನ ಮಾನಸಿಕತೆಯ ಮಟ್ಟ ಕೂಡ ಅವಳಿಗೆ ಸಮವಾಗಿಯೇ ಇದೆಯೋ ಏನೋ ?

"ಮುಂದಿನ ತಿಂಗಳು ನಮ್ಮ ಮದುವೆ. ಲಗ್ನ ಪತ್ರಿಕೆ ಕಳುಹಿಸುತ್ತೇನೆ. ಹೊಟ್ಟೆ ತುಂಬಿಸಿಕೊಳ್ಳಲು ಬಂದು ಹೋಗು." ಜಂಬದಿಂದ ನುಡಿದು ಅವನೊಂದಿಗೆ ಅವಳು ಕಾರಿನತ್ತ ಹೆಜ್ಜೆ ಹಾಕಿದಳು.

ನನಗೆ ಕೋಪ ನೆತ್ತಿಗೇರಿತು. ಅವಳನ್ನು ಸಿಗಿದು ಬಿಡಬೇಕೆನ್ನಿಸಿತಾದರೂ ನನ್ನನ್ನು ನಾನು ತಡೆದುಕೊಂಡೆ. ಕೊಚ್ಚೆಯಲ್ಲಿ ಕಲ್ಲು ಹೊಡೆದು ಹೊಲಸು ಸಿಡಿಸಿಕೊಳ್ಳುವ ಮೂರ್ಖತನ ನಾನೆಂದಿಗೂ ಮಾಡಲಾರೆ.

ಈಗ ಸೂರ್ಯ ಸಂಪೂರ್ಣವಾಗಿ ಮುಳಗಿ ಹೋಗಿದ್ದ. ಕತ್ತಲು ತನ್ನ ಕರಾಳ ಸಾಮ್ರಾಜ್ಯ ಸ್ಥಾಪಿಸುವದಕ್ಕಾಗಿ ಹವಣಿಸುತ್ತಿತ್ತು. ಅದು ತನ್ನ ಹವಣಿಕೆಯಲ್ಲಿ ಯಶಸ್ವಿಯಾಗುತ್ತದೆಂಬುದು ಗೊತ್ತಿತ್ತಾದರೂ ನಾಳೆ ಸೂರ್ಯ ಮತ್ತೆ ಹುಟ್ಟಿ ಬರುತ್ತಾನೆಂಬ ಸತ್ಯದ ಅರಿವು ಕೂಡಾ ನನಗಿತ್ತು.


(ಭಾಗ 3ನ್ನು ಓದಿ)

No comments:

Post a Comment