Copy Right...!

I firstly declare here that all the content written in the blog is exclusively written by me and I hold the copyrights of each and everything. Be it a poem or a novel or a story are exclusively owned by me. This declaration is important in a world that seems so worried of piracy.

Saturday, October 29, 2011

ಬಣ್ಣದ ಚಿಟ್ಟೆ - ಭಾಗ 3

ಆರು ವರ್ಷಗಳ ನಂತರ …..!

“ರೀ !” ಧ್ವನಿ ಕಿವಿಗಳ ತಮಟೆಗಳಿಗೆ ತಲಪುತ್ತಿರುವಂತೆಯೆ ಯಾರೋ ನನ್ನ ದೇಹವನ್ನು ಅಲುಗಿಸುತ್ತಿರುವ ಅನುಭವವಾಯಿತು.

“ರೀ, ಎದ್ದೇಳ್ರಿ, ನಾಲ್ಕು ಗಂಟೆಯಾಗಿದೆ.”

ಕಣ್ಣುಜ್ಜುತ್ತಾ ಎದ್ದು ಕುಳಿತಾಗ ಮಂಚದ ಪಕ್ಕದಲ್ಲಿ ತ್ರಿವೇಣಿ ತನ್ನ ಟೊಂಕದ ಮೇಲೆ ಕೈಗಳನ್ನಿಟ್ಟು ಕೋಪದ ಮುದ್ರೆಯಲ್ಲಿ ನಿಂತಿರುವುದು ಕಂಡುಬಂತು.

“ಎಷ್ಟು ಸಲ ಹೇಳಿದ್ದೀನಿ ನಿಮಗೆ, ಮಧ್ಯಾಹ್ನ ಮಲಗಬಾರದೂಂತ. ಆದರೆ ನನ್ನ ಮಾತು ಒಂದು ಸಲವಾದರೂ ಕೇಳ್ತಿರಾ ನೀವು ?” ಅವಳು ಕೇಳುವ ಶೈಲಿಗೆ ನನಗೆ ನಗು ಬಂತು.

“ನಾನು ಮಧ್ಯಾಹ್ನ ಮನೆಯಲ್ಲಿ ಇರೋದು ಸಂಡೇ ಮಾತ್ರ. ಈ ದಿನವಾದರೂ ಆರಾಮವಾಗಿ ಮಲಗಲು ಬಿಡಬಾರದಾ?” ನಾನೂ ಅವಳದೆ ಶೈಲಿಯಲ್ಲಿ ಕೇಳಿದೆ.

“ಅದೆಲ್ಲ ನನಗೆ ಗೊತ್ತಿಲ್ಲ. ನೀವು ಈ ದಿನ ನನಗೆ ಶಾಪಿಂಗ್ ಮಾಡಿಸುವುದಾಗಿ ಹೇಳಿದ್ರಿ. ಸೋ, ನೀವೀಗ ರೇಡಿಯಾಗ್ತಾ ಇದ್ದಿರಾ ಅಷ್ಟೆ” ಅವಳು ನನ್ನ ರೆಟ್ಟೆ ಹಿಡಿದು ಮಂಚದಿಂದ ಬಲವಂತವಾಗಿ ಎಬ್ಬಿಸುತ್ತಾ ನುಡಿದಳು.

ಕಳೆದ ಆರು ವರ್ಷಗಳಲ್ಲಿ ನನ್ನ ಜೀವನ ಸಾಕಷ್ಟು ತಿರುವು ಪಡೆದುಕೊಂಡಿದೆ. ನಾಲ್ಕು ವರ್ಷಗಳ ಹಿಂದೆ ಪ್ರೌಡಶಾಲಾ ಶಿಕ್ಷಕನಾಗಿ ನೇಮಕಗೊಂಡಾಗಿನಿಂದಲೂ ನನ್ನ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಬ್ಯಾಂಕಿನಿಂದ ಸಾಲ ಪಡೆದು ಸ್ವಂತ ಮನೆಯನ್ನು ಕಟ್ಟಿಸಿದ್ದಾಗಿದೆ. ಅಟ್ಲಸ್ ಸೈಕಲ್ ಜಾಗದಲ್ಲಿ ಸ್ಪ್ಲೆಂಡರ್ ಬೈಕ್ ಬಂದಿದೆ. ಹೋದ ವರ್ಷವಷ್ಟೆ ತ್ರಿವೇಣಿ ನನ್ನ ಬಾಳ ಸಂಗಾತಿಯಾಗಿ ಜೀವನವನ್ನು ಪ್ರವೇಶಿಸಿದ್ದಾಳೆ. ಈಗ ಬದುಕಿನಲ್ಲಿ ಸಾಕಷ್ಟು ಸಂತೋಷವೂ ನೆಮ್ಮದಿಯೂ ಇದೆ.

ಅರ್ಧ ಗಂಟೆಯ ನಂತರ ನಾನು ಹೊರಗಡೆ ಹೋಗುವುದಕ್ಕಾಗಿ ಸಿದ್ಧನಾಗಿದ್ದೆ. ಆದರೆ ತ್ರಿವೇಣಿ ಮಾತ್ರ ಇನ್ನು ಕನ್ನಡಿಯ ಮುಂದಿನಿಂದ ಸರೆದಿರಲಿಲ್ಲ. ಅವಳು ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದಳು. ಅವಳ ಮುಖ ನೈಸರ್ಗಿಕವಾಗಿಯೆ ಅಷ್ಟೊಂದು ಬೆಳ್ಳಗಿರುವಾಗ ಮತ್ತೆ ಯಾಕೆ ಪೌಡರ್ ಹಚ್ಚಿಕೊಳ್ಳುತ್ತಾಳೊ ನನಗಂತೂ ಇದುವರೆಗೂ ಅರ್ಥವಾಗಿಲ್ಲ.

“ನನ್ನನ್ನು ಎಬ್ಬಿಸುವುದಕ್ಕೂ ಮುಂಚೆಯೇ ನೀನು ರೆಡಿಯಾಗಿರಬೇಕಿತ್ತು ವೇಣಿ” ಕನ್ನಡಿಯಲ್ಲಿ ಕಾಣಿಸುತ್ತಿದ್ದ ಅವಳ ಪ್ರತಿಬಿಂಬವನ್ನು ನೋಡುತ್ತಾ ನುಡಿದೆ.

“ಆಯ್ತು ಮಹಾರಾಯರೆ, ಆಯ್ತು.” ಒಂದೇ ಒಂದು ಕ್ಷಣಕ್ಕೊಸ್ಕರ ಕನ್ನಡಿಯಿಂದಲೆ ತನ್ನ ದೃಷ್ಟಿಯನ್ನು ನನ್ನ ಮೇಲೆ ನೆಟ್ಟು, ಮತ್ತೆ ಮೇಕಪ್ ಬಾಕ್ಸಿನಿಂದ ಏನನ್ನೊ ತೆಗೆಯತೊಡಗಿದಳು. ಅವಳ ಈ ‘ಆಯ್ತು’ ಎಂಬ ಪದಕ್ಕೆ ‘ಈಗ ಶುರುವಾಯ್ತು’ ಎಂಬರ್ಥವಿರಬೇಕು.

ಸುಮಾರು ಹದಿನೈದು ನಿಮಿಷಗಳ ನಂತರ ನಾವು ಮನೆಯಿಂದ ಹೊರಗೆ ಕಾಲಿಟ್ಟೇವು. ರಿಸ್ಟ್ ವಾಚ್ ನಲ್ಲಿ ಸಮಯ ನೋಡಿಕೊಂಡಾಗ ಅದು ಐದು ಗಂಟೆಗೆ ಹತ್ತು ನಿಮಿಷ ಕಡಿಮೆ ಇರುವುದನ್ನು ತೋರಿಸುತಿತ್ತು. ಬೈಕ್ ಏರಿ ಕುಳಿತಾಗ –

“ಯಾವ ಕಡೆ ಹೋಗೊಣ ?” ಹಿಂದೆ ತಿರುಗಿ ಆದರ್ಶ ಗಂಡನ ಪ್ರಶ್ನೆ ಕೇಳಿದೆ.

“ಸುಪರ್ ಮಾರ್ಕೇಟ್ ನಲ್ಲಿ ಒಳ್ಳೆ ಸೀರೆ ಬಂದಿವೆಯಂತ ಅನುಸೂಯಾ ಆಂಟಿ ಹೇಳ್ತಾ ಇದ್ದರು. ಮೊದಲಿಗೆ ಅಲ್ಲಿಗೇ ಹೋಗೊಣ” ತನ್ನ ಒಂದು ಕೈಯನ್ನು ನನ್ನ ಭುಜದ ಮೇಲೆ ಇಟ್ಟು, ಇನ್ನೊಂದು ಕೈಯನ್ನು ನನ್ನ ಎದೆಯನ್ನು ಬಳಸುತ್ತಾ ನುಡಿದಳು.

ಜೇಬಿನಲ್ಲಿದ್ದ ಹಣವನ್ನು ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕೊ ಮನದಲ್ಲಿಯೆ ಲೆಕ್ಕ ಹಾಕುತ್ತಾ ನಾನು ಮರುಮಾತನಾಡದೆ ಬೈಕನ್ನು ಸುಪರ್ ಮಾರ್ಕೇತ್ ಕಡೆಗೆ ಹೋಗುವ ರಸ್ತೆ ಮೇಲೆ ಓಡಿಸತೊಡಗಿದೆ. ಹದಿನೈದು ನಿಮಿಷಗಳ ನಂತರ ನಾವು ಸುಪರ್ ಮಾರ್ಕೇಟಿನಲ್ಲಿದ್ದೇವು.

“ನೀನು ಇಲ್ಲೆ ನಿಲ್ಲು, ನಾನು ಬೈಕ್ ಪಾರ್ಕ್ ಮಾಡಿ ಬರುತ್ತೇನೆ” ಎಂದು ನುಡಿದು ಪಾರ್ಕಿಂಗ್ ಝೋನ್ ಕಡೆಗೆ ಬೈಕ್ ತಳ್ಳಿಕೊಂಡು ನಡೆದೆ. ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿ ಬಂದು –

“ಈಗ ಯಾವ ಕಡೆ ಹೋಗೊಣ ?” ಅವಳನ್ನು ಕೇಳಿದೆ.

“ಅಲ್ಲಿ ಕಾಣಿಸುತ್ತಿದೆಯಲ್ಲ, ದೇವಾನಂದ ಸಾರಿ ಸೆಂಟರ್, ಅಲ್ಲಿಗೆ.” ಒಂದು ಕಡೆ ತೋರುಬೆರಳಿನಿಂದ ಸೂಚಿಸುತ್ತಾ ನುಡಿದಳವಳು.

ನಾನು ಗೊಣಾಡಿಸುತ್ತಾ ಮೌನವಾಗಿ ಅವಳ ಜೊತೆ ನಡೆದೆ. ಇನ್ನು ದೇವಾನಂದ ಸಾರಿ ಸೆಂಟರ್ ಹದಿನೈದು ಅಡಿ ದೂರವಿದೆ ಎನ್ನುವಷ್ಟರಲ್ಲಿಯೆ, ರಿಮೋಟ್ ಕಂಟ್ರೋಲ್ ನಿಂದ ಟಿ.ವಿ.ಯಲ್ಲಿನ ದೃಶ್ಯವೊಂದನ್ನು ಫ್ರೀಜ್ ಮಾಡುವಂತೆ, ಗಕ್ಕನೆ ನಿಂತೆ.

ಎದುರುಗಡೆ !

ದೇವಾನಂದ ಸಾರಿ ಸೆಂಟರ್ ನ ಮೆಟ್ಟಲುಗಳ ಮೇಲೆ ಅವಳು ನಿಂತಿದ್ದಳು. ಆರು ವರ್ಷಗಳ ಹಿಂದೆ ನನ್ನ ಜೀವನದಲ್ಲಿ ಬಿರುಗಾಳಿ ಎಬ್ಬಿಸಿ ಕತ್ತಲೆಯಲಿ ತಳ್ಳಿ ಮಾಯವಾದಾಕೆ, ಅವಳು, ಹೌದು ಅವಳೇ, ಬಣ್ಣದ ಚಿಟ್ಟೆ…!

ನಾನು ಆ ರೀತಿ ನಿಂತದ್ದು ಜೊತೆಗೆ ಬರುತ್ತಿದ್ದ ತ್ರಿವೇಣಿಗೆ ಆಶ್ಚರ್ಯ ಉಂಟು ಮಾಡಿತು.

“ಏನಾಯ್ತು ? ಯಾಕೆ ನಿಂತ್ರಿ?” ಅವಳು ಕೇಳಿದಳು.

“ಈ ಅಂಗಡಿ ಬೇಡ ತ್ರಿವೇಣಿ, ಬೇರೆ ಯಾವುದಾದರೂ ಅಂಗಡಿಗೆ ಹೋಗೊಣ.” ನಾನು ಶಾಂತವಾದ ಧ್ವನಿಯಲ್ಲಿ ನುಡಿದೆ.

“ಯಾಕ್ ಬೇಡ ?” ಅವಳು ಆಶ್ಚರ್ಯದಿಂದ ಕೇಳಿದಳು.

“ಸುಮ್ಮನೆ ಹೀಗೇ !”

“ಇಲ್ಲಿ ತುಂಬಾ ಒಳ್ಳೇ ಸೀರೆ ಸಿಗುತ್ತವಂತೆ ರೀ, ಅದೂ ಡಿಸ್ಕೌಂಟಿನಲ್ಲಿ” ಅವಳು ಒತ್ತಾಯಿಸುವಂತೆ ನುಡಿದಳು.

“ಅಲ್ಲಿ ನೋಡು, ಮೆಟ್ಟಿಲುಗಳ ಮೇಲೆ ನಿಂತಿದ್ದಾಳಲ್ಲ ಅವಳನ್ನು” ಕಣ್ಣುಗಳಲ್ಲೆ ಸೂಚಿಸುತ್ತ ನುಡಿದೆ.

“ಯಾರವಳು ?” ತ್ರಿವೇಣಿಯ ಧ್ವನಿ ಸಂದೇಹದಿಂದ ಕೂಡಿತ್ತು.


(ಭಾಗ 4ನ್ನು ಓದಿ)

No comments:

Post a Comment